ಅವಿಜ್ಞಾನಿ

ಅವಿಜ್ಞಾನಿ ಯನ್ನು ಹುಡುಕುತ್ತಿದ್ದೀರಾ!?

ಹಿಂಬಾಲಿಸಿ

ಅವಿಜ್ಞಾನಿ
ಖಾಲಿ ಜೇಬಿನ ಫಕೀರ
ಹಿಂಬಾಲಿಸಿ
‹ Home

ಐನೂರು

ಒಂದು ದಿನದ ಕೂಲಿ ಐನೂರು,ಐದಾರು ಜನರ ಕುಟುಂಬ ಅದರಲ್ಲಿಯೇ ಆ ದಿನದ ಊಟ,ಮನೆಬಾಡಿಗೆ,ವಿದ್ಯುತ್ತ್,ಶಾಲೆ ಪೀಸು,ಗ್ಯಾಸ್,ಸಾಲ ಸಂದಾಯ ಮತ್ತು ಇನ್ನಿತರ ಎಲ್ಲಾ ಖರ್ಚು ಮಾಡಬೇಕಾದದ್ದು,ಲೆಕ್ಕ ಹಾಕಲು ಕುಳಿತರೆ ಲೆಕ್ಕವೇ ನಗುತ್ತದೆ,ನಗಲಿ,ಲೆಕ್ಕಕ್ಕೂ ಗೊತ್ತು,ಹಣಕ್ಕೂ ಗೊತ್ತು,ಹೊಟ್ಟೆಗೂ ಗೊತ್ತು,ಆದರೂ ದಿನ ಹೋಗಬೇಕು,ದಿನ ಹೋಗದಿದ್ದರೆ ಏನು ಮಾಡುವುದು. ಬೆಳಿಗ್ಗೆ ಹೊರಡುವಾಗ ಬಿಸಿಲು ಇನ್ನೂ ಏರಿರುವುದಿಲ್ಲ,ದಾರಿ ತಣ್ಣಗಿರುತ್ತದೆ,ಚಪ್ಪಲಿ ಸವೆದಿದೆ,ಸವೆದ ಚಪ್ಪಲಿಯಲ್ಲೇ ಹೆಜ್ಜೆ ಹೋಗುತ್ತದೆ,ಮಧ್ಯಾಹ್ನದ ಬಿಸಿಲು ತಲೆಯ ಮೇಲೆ ನಿಂತಾಗ ಬೆವರು ಕಣ್ಣಿಗೆ ಬೀಳುತ್ತದೆ,ಬೆವರು ಒರೆಸಲು ಕೈಯಲ್ಲಿ ಸಮಯವಿರುವುದಿಲ್ಲ,ಕೈ ಕೆಲಸದಲ್ಲಿರುತ್ತದೆ,ಹೊಟ್ಟೆಯಲ್ಲಿ ಏನೋ ಬಣಗುಡುತ್ತದೆ,ಬಣಗುಟ್ಟಲಿ,ಊಟದ ಸಮಯಕ್ಕೆ ಊಟವಿದೆ,ಊಟವಿದ್ದರೆ ಊಟ,ಇಲ್ಲದಿದ್ದರೆ ನೀರು,ನೀರು ಕುಡಿದು ಕೆಲಸ ಮುಂದುವರಿಯುತ್ತದೆ,ದಿನ ಮುಂದುವರಿಯುತ್ತದೆ. ಸಂಜೆ ಕೈಗೆ ಐನೂರು ಬಂದಾಗ ಲೆಕ್ಕ ಶುರುವಾಗುತ್ತದೆ,ಇಷ್ಟು ಊಟಕ್ಕೆ,ಇಷ್ಟು ಬಾಡಿಗೆಗೆ,ಇಷ್ಟು ಕರೆಂಟಿಗೆ,ಇಷ್ಟು ಸಾಲಕ್ಕೆ,ಲೆಕ್ಕ ಮಾಡುವಾಗ ಹಣ ಕರಗುತ್ತದೆ,ಕರಗುವುದನ್ನು ನೋಡುತ್ತಲೇ ಇರಬೇಕು,ಕರಗಿದ ಮೇಲೆ ಉಳಿದದ್ದು ಏನು ಅಂತ ಕೇಳಿದರೆ,ಉತ್ತರವಿಲ್ಲ,ಉತ್ತರವಿದ್ದರೂ ಹೇಳಲು ಆಗುವುದಿಲ್ಲ,ಬಹುಶಃ ಉತ್ತರವೇ ಇಲ್ಲ,ಇರಲಿಬಿಡಿ,ನಾಳೆ ಮತ್ತೆ ದಿನವಿದೆ,ನಾಳೆ ಮತ್ತೆ ಕೆಲಸವಿದೆ,ಕೆಲಸವಿದ್ದರೆ ಹಣವಿದೆ,ಹಣವಿದ್ದರೆ ಲೆಕ್ಕವಿದೆ. ರಾತ್ರಿ ಮಲಗಿದಾಗ ಲೆಕ್ಕ ಮಲಗುವುದಿಲ್ಲ,ಶಾಲೆ ಪೀಸು ಕಟ್ಟಬೇಕೆಂಬುದು ನೆನಪಾಗುತ್ತದೆ,ಗ್ಯಾಸ್ ಮುಗಿಯಿತೆಂಬುದು ನೆನಪಾಗುತ್ತದೆ,ನೆನಪಾದದ್ದೆಲ್ಲಾ ಬೆಳಿಗ್ಗೆಗೂ ಕಾಯುವುದಿಲ್ಲ,ರಾತ್ರಿಯೇ ಎದೆ ಮೇಲೆ ಕುಳಿತುಕೊಳ್ಳುತ್ತದೆ,ಮಗ್ಗಲು ಬದಲಾಯಿಸಿದರೂ ಇಳಿಯುವುದಿಲ್ಲ,ಬಹುಶಃ ಲೆಕ್ಕಕ್ಕೂ ನಿದ್ದೆ ಬರುವುದಿಲ್ಲ,ಬಂದರೆ ಚೆನ್ನಾಗಿತ್ತು,ಬರುವುದಿಲ್ಲ,ಇರಲಿಬಿಡಿ,ಬೆಳಕು ಹರಿದಾಗ ಮತ್ತೆ ದಾರಿ,ಮತ್ತೆ ಕೆಲಸ,ಮತ್ತೆ ಅದೇ ಐನೂರು,ಅದೇ ಐನೂರು ಬೇರೆ ಬೇರೆ ಹೆಸರಲ್ಲಿ ಕರಗುತ್ತದೆ,ಊಟವೆಂದು,ಬಾಡಿಗೆಯೆಂದು,ಸಾಲವೆಂದು,ಹೆಸರು ಬದಲಾದರೂ ಹಣ ಬದಲಾಗುವುದಿಲ್ಲ,ಹಣದ ಹಿಂದೆ ದಿನ ಓಡುತ್ತದೆ,ದಿನದ ಹಿಂದೆ ಹಣ ಓಡುತ್ತದೆ,ಯಾವುದು ಮುಂದು ಯಾವುದು ಹಿಂದು ಗೊತ್ತಾಗುವುದಿಲ್ಲ. ಬೆಳಿಗ್ಗೆ ಹೊರಡುವಾಗಲೇ ಹಣ ಖರ್ಚಾಗಿರುತ್ತದೆ,ಲೆಕ್ಕದಲ್ಲಿ ಊಟ ಹೋಗಿದೆ,ಬಾಡಿಗೆ ಹೋಗಿದೆ,ಸಾಲ ಹೋಗಿದೆ,ಹೋಗಬೇಕಾದದ್ದು ಹೋಗಿದೆ,ಹೋಗದಿದ್ದದ್ದು ಏನು,ಏನೂ ಇಲ್ಲ,ಖಾಲಿ ಕೈಯಲ್ಲಿ ಹೊರಡುವುದು,ಖಾಲಿ ಕೈಯಲ್ಲಿ ಹಿಂದಿರುಗುವುದು,ಹಿಂದಿರುಗಿದಾಗ ಕೈ ತುಂಬಿರುತ್ತದೆ,ತುಂಬಿದ ಕೈ ಖಾಲಿಯಾಗಲು ಸಂಜೆಯೇ ಸಾಕು,ಸಂಜೆ ಖಾಲಿಯಾದರೆ ರಾತ್ರಿ ಲೆಕ್ಕ,ರಾತ್ರಿ ಲೆಕ್ಕವಾದರೆ ಬೆಳಿಗ್ಗೆ ಮತ್ತೆ ಖಾಲಿ,ಇದೇ ದಿನಚರಿ,ದಿನಚರಿ ಬದಲಾದರೆ ಏನಾಗುತ್ತದೆ,ಏನೂ ಆಗುವುದಿಲ್ಲ,ದಿನಚರಿ ಬದಲಾಗುವುದಿಲ್ಲ. ಆದರೆ ಒಂದು ದಿನ ಕೆಲಸ ಇಲ್ಲದೇ ಹೋದರೆ,ಒಂದೇ ಒಂದು ದಿನ,ಮೇಲಿನ ಎಲ್ಲಾ ವಿಷಯಗಳೂ ಬಾಧಿಸಲ್ಪಡುತ್ತವೆ,ಊಟ ಬಾಧಿಸಲ್ಪಡುತ್ತದೆ,ಬಾಡಿಗೆ ಬಾಧಿಸಲ್ಪಡುತ್ತದೆ,ಸಾಲ ಬಾಧಿಸಲ್ಪಡುತ್ತದೆ,ಮತ್ತು ಮುಂದಿನ ಎಷ್ಟೋ ದಿನಗಳಾಗಿ ಅದನ್ನು ಬ್ಯಾಲೆನ್ಸ್ ಮಾಡಬೇಕು,ಒಂದು ದಿನದ ಕೊರತೆಯನ್ನು ಎಷ್ಟೋ ದಿನ ಹೊತ್ತುಕೊಂಡು ಹೋಗಬೇಕು,ಹೊತ್ತುಕೊಂಡು ಹೋಗುವಾಗ ಬೆನ್ನು ಬಾಗುತ್ತದೆ,ಬೆನ್ನು ಬಾಗಿದರೂ ನಡೆಯಬೇಕು,ನಡೆಯದಿದ್ದರೆ ಏನು ಮಾಡುವುದು,ನೋಡೋಣ,ನಾಳೆ ಕೆಲಸವಿದೆಯೋ ಇಲ್ಲವೋ..!
-ಅವಿಜ್ಞಾನಿ

ಇನ್ನೂ ಓದಿ: ಲೇಖನಗಳು

🤖 ಅವಿಜ್ಞಾನಿ AI