ಅಚ್ಚಾಗಿದ್ದು My Book
ಕವಿ ಅವಿಜ್ಞಾನಿಯವರ ಪ್ರಥಮ ಕವನ ಸಂಕಲನ — ೨೦೨೪ರ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ವಿಜೇತ ಕೃತಿ. ಮುನ್ನುಡಿ: ಡಾ. ಕೆ. ಷರೀಫಾ, ಬೆಂಗಳೂರು.
Avigyani's first poetry collection — winner of the Ee Hottige Kavya Award 2024.
ವಿವರಣೆ · Description
“ಆಳಿದವರೇ ಮುಖ ಮರೆಸಿಕೊಳ್ಳಿ, ನನ್ನ ದೇಹದಲ್ಲೆಲ್ಲಾ ನೀವಿಟ್ಟ ಗೀರುಗಳಿವೆ” — ಇದು ಮಂಗಳೂರು ಜಿಲ್ಲೆಯ ಸಜೀಪನಡು ಗ್ರಾಮದವರಾದ ನಿಜಾಮ್ ಗೊಳಿಪಡ್ಪು ಅವರ “ಅನಾಮಧೇಯ ಗೀರುಗಳು” ಕವನಸಂಕಲನದ ಸಾಲುಗಳು. ಇವರ “ಅನಾಮಧೇಯ ಗೀರುಗಳು” ಕವನ ಸಂಕಲನಕ್ಕೆ ೨೦೨೪ರ ಪ್ರತಿಷ್ಟಿತ ಈ ಹೊತ್ತಿಗೆ ಕಾವ್ಯ ಪ್ರಶಸ್ತಿ ದೊರಕಿದ್ದಕ್ಕೆ ಅಭಿನಂದನೆಗಳು. ಕೇವಲ ಪಿಯುಸಿ ಓದಿ ಕೂಲಿಕೆಲಸ ಮಾಡುತ್ತಿರುವ ಚಿಕ್ಕ ವಯಸ್ಸಿನ ಪೋರ ಇಂತಹ ಕವಿತೆಗಳನ್ನು ಬರೆಯಬಲ್ಲನೆ ಎಂದು ನನಗೆ ಒಂದು ಕ್ಷಣ ಅನಿಸಿದ್ದುಂಟು. ಏಕೆಂದರೆ ನಿಜಾಮರವರ ಕವಿತೆಗಳು ಬಹಳ ಎತ್ತರದ ಕವಿತೆಗಳಾಗಿವೆ. ಪಾಬ್ಲೋ ನೆರೋದನು ಒಂದು ಪಕ್ಷಿಯ ಸಾವನ್ನು ನೋಡಿ ಬರೆದ ಮಾರ್ಮಿಕ ಕವಿತೆಯನ್ನು ನೋಡಿ ಅವರ ತಂದೆಯೂ ಈ ಪೋರ ಇಂತಹ ಕವಿತೆ ಬರೆಯಬಲ್ಲನೇ ಎಂದು ಅಂದುಕೊಂಡಿದ್ದರಂತೆ.
ಅವಿಜ್ಞಾನಿ ಹೆಸರಿನಲ್ಲಿ ಬರೆಯುತ್ತಿದ್ದ ಇವರು ಕನ್ನಡದ ಹೊಚ್ಚ ಹೊಸ ಪ್ರತಿಭೆ. ಇವರ ಬದುಕು, ಭವಣೆ, ಇಕ್ಕಟ್ಟು, ಸಂಕಷ್ಟ, ಸಂಭ್ರಮಗಳ ನಡುವೆ ಜೀಕಿದ ಜೀವನವೇ ಇವರ ಕಾವ್ಯವಾಗಿದೆ. ಇಲ್ಲಿಯ ಬಹುತೇಕ ಕವಿತೆಗಳು ಇಂತಹ ಜೀವನ ತತ್ವದ ಪಡಿಯಚ್ಚಾಗಿವೆ. ಹಲವಾರು ತಲ್ಲಣದ ಕ್ಷಣಗಳನ್ನು ಅವರು ನೋವಿನಾಳದ ಕೋಳವೆಯೊಳಗಿಂದ ನುಡಿಯುತ್ತಾರೆ. ಇವರ ಕವಿತೆಗಳಲ್ಲಿ ಒಂದು ಭಿನ್ನವಾದ ಲೋಕವಿದೆ. ಅದನ್ನು ಮುಸ್ಲಿಂ ಸಂವೇದನೆ ಎಂಬ ಚೌಕಟ್ಟಿಗೆ ಕೂಡಿಸಲಾಗದು. ಬದುಕಿನ ನೋವಿನ, ತಲ್ಲಣದ ಕ್ಷಣಗಳನ್ನು ಮತ್ತು ಬದುಕಿನ ವಿಷಾದ, ನಿಟ್ಟುಸಿರಿನ ಕ್ಷಣಗಳನ್ನು ಕಣ್ಣಿಗೆ ಕಟ್ಟುವಂತೆ ಇಲ್ಲಿ ಹಿಡಿದಿಟ್ಟಿದ್ದಾರೆ. ನಿಜಾಮರವರ ಕವಿತೆಗಳಲ್ಲಿ ಬುದ್ಧಿ, ಭಾವ, ತರ್ಕ, ಶಬ್ದ, ಅರ್ಥಗಳೆಲ್ಲವೂ ಕರಗಿ ನೀರಾಗಿ ಸಂವೇದನಾ ಸ್ವರೂಪದಲ್ಲಿ ಹರಿವ ನದಿಯಾಗಿವೆ. ಇವರ ಕಾವ್ಯ ಸಹಜವಾಗಿ ಹರಿಯುತ್ತದೆ.
ಇವರ ಪ್ರಥಮಕೃತಿ “ಅನಾಮಧೇಯ ಗೀರುಗಳು” ಇವರಿಗೆ ಪ್ರಶಸ್ತಿಯನ್ನೂ ಸಹ ತಂದುಕೊಟ್ಟಿರುವುದಕ್ಕೆ ಅಭಿನಂದನೆಗಳು. ಈ ಮಹತ್ವದ ಕವಿಯನ್ನು ಪೋಷಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರದೂ ಆಗಿದೆ. ಅವರಿಂದ ಇನ್ನೂ ಮಹತ್ವದ ಕೃತಿಗಳು ಹೊರಬರಲೆಂಬ ಹಾರೈಕೆಗಳೊಂದಿಗೆ.
