
ನನ್ನನ್ನು ಕ್ಷಮಿಸಿ
ನನ್ನನ್ನು ಕ್ಷಮಿಸಿ
ಕ್ಷಮಿಸಿ ನಿಮ್ಮ ಅಂತರಾಳದಿಂದ
ನಾಭಿ ಸೀಳಿದ ಕರುಣಾಜನಕತೆಯೊಂದು
ನಿಮ್ಮಲ್ಲಿ ನನ್ನ ಕುರಿತಾಗಿ
ಇದ್ದರೆ
ಬೇಷರತ್ ಕ್ಷಮೆ ಕೇಳುತ್ತೇನೆ
ಕಾಲ ಗೋಡೆಯ
ನಡುವಲ್ಲಿ ಜಂಗನೆ
ಹಾರಿದ ಜಂತು ಹುಳ
ಕೂದಲ ಮಹಡಿಯನ್ನು
ಸೆರೆಯಾಗಿಸಿ ಹಿಡಿದು
ಉತ್ತರ ದಕ್ಷಿಣ
ಪರ್ವತ ಪ್ರಪಾತ ಗುಡಿ
ಗರುಡಿ,ಅಟ್ಟ,ಬಾಗಿಲು
ನೆಲ,ಮಳೆಯೆಲ್ಲ ಆಳುವೆ
ಎನ್ನುವಾಗಿನ ಕೌತುಕ
ನಿಮ್ಮಲ್ಲಿ ಆಶ್ಚರ್ಯ
ಹುಟ್ಟಿಸಿದ್ದೇ ಆದಲ್ಲಿ
ಬನ್ನಿ ಕೂತು
ದೇವರ ಕುರಿತು ಚರ್ಚಿಸಿ
ಸಾವಿನ ಹಲ್ಲಿನಲ್ಲಿ
ಬದುಕು ಕಚ್ಚುವ
ನನ್ನಾತ್ಮವೆಂಬ ಹಾವಿನ
ವಿಷ ಪಸರಿಸಿದ
ಜಾಗದಲ್ಲಿ ನೆರತ
ಹುಲ್ಲಿನ ಕಥೆಯೊಂದು
ನಿಮ್ಮ ತರ್ಕಕ್ಕೆ ಉತ್ತರ
ಆಗಬಹುದು
ತೋಡು,ನೆಲ
ಮಾಳಿಗೆ,ಜಮೀನಿನ
ರಹದಾರಿಯಲ್ಲಿ ಹರಿಯಬಿಟ್ಟ
ನಿಮ್ಮೊಳಗಿನ ಕೌತುಕ
ಸಾವಿನ ಸಂಚಲನ
ಹುಟ್ಟಿಸಿ ಬಿಡುವುದು
ಮತ್ತು
ನಗ್ನ ಹುಡುಗಿಯ ನೆನೆದು
ಕೈಮೈಥುನ ಮಾಡಿಕೊಂಡ
ಹುಡುಗನ ಸಂತೃಪ್ತಿಯಲ್ಲಿ
ನಿಮ್ಮ ಕೌತುಕ ಮುದುಡಿ
ಮಲಗಿರುತ್ತದೆ
ಪುರಾಣ ಪುಣ್ಯ ಕಥೆಯ
ಸೆರಗಲ್ಲಿ ಬ್ರಹ್ಮಾಂಡದ
ಸಾರವನ್ನೇ ನೆಂಚಿತಿನ್ನುವ
ನಿಮ್ಮ ಕೌತುಕ
ಬರಿದಾಗುತ್ತಾ ತುಂಬಿಕೊಳ್ಳುತ್ತದೆ
ಈ ಕೌತುಕದ
ಕಟ್ಟುಕಡೆಯ ಆಣೆಯೂ
ನನ್ನಾತ್ಮದ ಮೇಲೆ
ಬಡಿದುಕೊಂಡಿದ್ದೇನೆ
ಅದಕ್ಕಾಗಿ ನನ್ನನ್ನು ಕ್ಷಮಿಸಿ
ನಾಭಿ ಸೀಳಿದ ಕರುಣಾಜನಕ
ಕಥೆಯನ್ನು ಕುಯ್ಯುಬಿಡಿ
ಕೌತುಕ ಉಸಿರಾಡುತ್ತಿರಲಿ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments