
ಬದುಕಿಗೆ ರಂಗು
ಬದುಕಿಗೆ ರಂಗು ಮೆತ್ತುವ ಈ ಉಸಾಬರಿ, ಶತಮಾನಗಳಿಂದ ನನ್ನ ಬೆನ್ನು ತೊರೆದಿಲ್ಲ.
ಇನ್ನೂ ರೂಪ ಬೇಕು, ರೂಪ ಬೇಕು ಎನ್ನುವ ಸದ್ಧಿಗೆ, ಕುಂಚದ ಕಣ್ಣೀರಷ್ಟೇ ಇಂಗಿ ಹೋಗುತ್ತಿದೆ.
ಪ್ರೀತಿಯ ಬಣ್ಣ ಹಚ್ಚಿದಾಗ, ಮೋಸದ ಚಿತ್ತಾರವೂ ಅರಳುತ್ತದೆ.
ಪ್ರೇಮದ ಚಿನ್ಹೆ ಇಟ್ಟಲ್ಲಿ, ಕಾಮದ ಮೊಗ್ಗು.
ನಲಿವಿನ ನೆರಳಾಡಿಸಿದ್ದಷ್ಟೇ, ದುಃಖ ಸಾಗರವೇ ಹರಿಯತೊಡಗುತ್ತದೆ.
ಕ್ಯಾನ್ವಾಸ್ ತುಂಬಾ ಸುಖದ ಬಣ್ಣ ಹುಡುಕುತ್ತೇನೆ, ಕೈಗೆಟಕುವುದು ದರ್ದಿನ ಕುಪ್ಪಿಗಳು.
ಸ್ನೇಹದ ರೇಖೆ ಎಳೆದಲ್ಲಿ, ನಂಜಿನ ಚುಕ್ಕೆ ಲಗ್ಗೆ ಇಟ್ಟಂತೆ.
ನಂಬಿಕೆಯ ಗೆರೆಗೆ, ದ್ರೋಹದ ಶೇಡ್ ಅಡ್ಡ ಬರುತ್ತದೆ.
ಪರಿಪೂರ್ಣ ಬಣ್ಣ ಮೆತ್ತಲಾಗದಿದ್ದಾಗ, ಬದುಕಿನ ಒಂದೇ ಹನಿ ಚಿಮುಕಿಸ ನೋಡುತ್ತೇನೆ.
ಒಳಗಿಳಿದ ಪ್ರತಿ ಬೊಟ್ಟುಗಳೂ, ಸಾವಿನ ಅಮೂರ್ತ ರೂಪವಾಗಿ ಮಾರ್ಪಾಟುಗೊಳ್ಳುತ್ತದೆ.
ಈ ರಂಗಿನ ಉಸಾಬರಿ ದಕ್ಕುವುದಿಲ್ಲ ನನಗೆ.
ಇನ್ನೂ ಬೇಕೆನ್ನುವ ಘೋಷಣೆ ನಿಲ್ಲುವುದಿಲ್ಲ, ಕೊನೆಗೆ!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments