
ಅವ ಬಂಡೆಕಲ್ಲಿನಂತೆ
ಅವ ಬಂಡೆಕಲ್ಲಿನಂತೆ
ಬದುಕಿದ್ದ ಅನ್ನುತ್ತಾನೊಬ್ಬ
ಯಾವ ಮೊಳಕೆಯೂ
ಚಿಗುರೊಡೆಯದ
ಬಾಳ ಆಂಗಲದಲ್ಲಿ
ಬಂಡೆಯಂತಾಗಿದ್ದ ನಿಜವಾಗಿ
ತೂತು ಬಾಯಿಯ
ಜಗತ್ತಿನೆದುರು ಹೊಲೆದ
ತುಟಿಯಿದ್ದರೆ
ಈಜಲಾಗದೆಂಬೋದು
ಅವನಿಗೆ ತಿಳಿದಿರಲಿಲ್ಲ
ನಾಜೂಕಿನ ಈಜು
ದಕ್ಕುವುದಲ್ಲ
ಅನ್ನೋದು ತಿಳಿಯಲಾಗಲಿಲ್ಲ ಕೊನೆಗೂ
ಗುದ್ದಿ ಗುದ್ದಿ ಹಿಂಡಿಯಾದ
ಬಾಳ ಕಾಗದವ ಹಾಕಲು
ತಿಪ್ಪೆಯೂ ಸಿಗದಿದ್ದಾಗ
ಆತ ಬಂಡೆಕಲ್ಲಾದ
ಇದು
ಆತನ ಬಲ್ಲವರು
ಹೇಳಬಹುದಾದದ್ದು
ಹಾಡಲಾರದ ಪದ್ಯವಾಗಿದ್ದ
ಆತ ತನ್ನದೇ ಪದಗಳಲ್ಲಿ
ಯಾವ ಬಿಂದೂ
ಕೊನೆಯ ಚುಕ್ಕೆ ಸೇರಿಸಲಿಲ್ಲ
ತನ್ನ ಬಗಲ ಮೌನವಷ್ಟನ್ನೇ
ಸಾಂತ್ವನಗೊಳಿಸೋದ
ಕಲಿಯುವವರೆಗೂ
ಒಂದು ಗಾಢ ರಾತ್ರಿ
ಊರು ಇರುವಂತೆಯೇ
ಗಾಳಿಯ ಎಳೆ
ಹಿಡಿದು ಅನೂಹ್ಯತೆಯಲ್ಲಿ
ತೂರಿಕೊಂಡ ಆರ್ಯತೆಯಿಂದ
ಹಸಿದ ಜೋಳಿಗೆ
ತುಂಬಾ ಜಗತ್ತಿನ
ಹರಿದ ಜೋಗುಳ
ತುಂಬಿಸುತಾ
ಈಗ,
ಅವ ಬಂಡೆಕಲ್ಲಿನಂತೆ
ಬದುಕಿದ್ದ
ಅನ್ನುತ್ತಾನೊಬ್ಬ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments