
ಈ ಗಿಜಿಗುಡುವ ಷಹರದ
ಈ ಗಿಜಿಗುಡುವ ಷಹರದ
ಮೂಲೆಯಲ್ಲಿ ಏಕಾಂತವನ್ನು
ಧೇನಿಸುವ ನನ್ನ ಬಗ್ಗೆ ಯಾವೊಂದು
ಪದ ಕವಿತೆ ಕಾವ್ಯ ದೊರಕದು
ನಿಮಗೆ
ಬದುಕಿನ ಬಟ್ಟೆಗೆ
ಕಸೂತಿ ಹಾಕುವಾಗ
ಬೆರಳುಗಳ ಹೊಲೆದುಕೊಂಡವನಿಗೆ
ನಕ್ಷತ್ರ ತೊಟ್ಟುಕೊಂಡವರ
ಮಧ್ಯೆ ಯಾವ ಬೆಳಕೂ ಸಿಗಲಾರದು
ಒಂಟಿ ಭರವಸೆಯ ಬೆನ್ನಿಗೆ
ನೇತುಹಾಕಿಕೊಂಡ ನನ್ನದೇ
ವಿಷಾದ ಪುಟಗಳ ತಿರುವಿ
ಖಾಲಿಕೋಣೆಯ ಮೂಕ
ಗೋಡೆಗೆ ಅಂಟಿಸುವ ಸದ್ದು
ಕಿವಿ ಮುರಿದ ಜಗಕೆ
ಕೇಳಿಸುವ ಇರಾದೆಯಿಲ್ಲ
ನಸೀಬಿಗೂ ಮುಖವಾಡ
ಇರುವ ದಿನಚರಿಯಲ್ಲಿ
ಏಕಮಾತ್ರವೂ
ಪವಾಡದ ಸಹಿಯ
ಅಚ್ಚರದು
ಬದಲಾಗಿ,
ತಿವಿದುಕೊಂಡು ಉಸಿರುಗಟ್ಟಿದ
ರೋದನೆಯ ರೋಹು
ಕಾಣಬಹುದು ಯಥೇಚ್ಚವಾಗಿ
ಆದ್ದರಿಂದ...
ಗಿಜಿಗುಡುವ ಈ ಷಹರದಲ್ಲಿ
ಏಕಾಂತ ಧ್ಯಾನಸ್ಥನಿಗೆ
ಒಂಟಿತನವಷ್ಟೇ ಪರಮಾಪ್ತ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments