
ಯಾರೂ ಸುಳಿಯದ
ಯಾರೂ ಸುಳಿಯದ
ಒಂಟಿತನಕ್ಕೆ ಜೋತು ಬೀಳುತ್ತೇನೆ
ಎದೆಬಿರಿದ ಸದ್ದು
ಎಲ್ಲೂ ಕೇಳಿಸಿದರಲಿಯೆಂದು
ನಯನಾಜೂಕು ಮುಡಿಗೇರಿಸಿಕೊಂಡ
ಈ ದುನಿಯಾದಲ್ಲಿ
ನನ್ನ ನೋವು ತೂಗುವುದಿಲ್ಲ
ತೂಸುವಾದರೂ
ಪಕ್ಕವಾಗುತ್ತೇನೆ
ಕಪಟವಿಲ್ಲದ
ದರ್ದಿನ ಸಂಗ
ಯಾವ ತಕ್ಕೆಯೂ ಇರದಾಗಿನ
ಹೊತ್ತು ಬಿಕ್ಕಳಿಕೆಯೂ
ಸಾಂತ್ವನವನಿಸುತ್ತಿದೆ
ಯಾವೊಂದೂ ವಾಗ್ದಾನವೂ
ನೆಲೆಗೊಳ್ಳದ ಹೊತ್ತು
ಕತ್ತಲ ಕಂಡದಲ್ಲಿ ಪಾದ
ಊರಿಕೊಳ್ಳುತ್ತೇನೆ
ಮತ್ತು ಕದಡಿದ ಬಿಂಬ
ಬೆಳಕನರಸುವುದಿಲ್ಲ
ಬದಲಾಗಿ ಹನಿಯಲಿ
ಚೂರಾಗಿ ಸೋಲುತದೆ
ಬಾಗಿದಷ್ಟು ಬೆಂಡೆತ್ತುವ
ಬದುಕ ಬಾಸುಂಡೆಗೆ
ಹಕೀಮನಿಲ್ಲದೇ ಅಲೆಯುತ್ತೇನೆ
ಒಂಟಿಹೆಜ್ಜೆ ಕಿತ್ತಿದರೂ
ನೆರಳ ಊರಿನಲ್ಲಿ
ವಿರಮಿಸಲು ಅರೆಘಳಿಗೆಯಾದರೂ...!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments