
ನಿನ್ನ ಬೆತ್ತಲೆ ಪಾದಗಳಿಗೊಮ್ಮೆ
ನಿನ್ನ ಬೆತ್ತಲೆ ಪಾದಗಳಿಗೊಮ್ಮೆ
ನಾ ಮುತ್ತನಿಟ್ಟು ಬಿಡಬೇಕು
ಆದದ್ದಾಗಲಿ ಇಲ್ಲೇ ಪಕ್ಕದಲ್ಲಿ ತೋಳಿಗೆ ಒರಗಿ ಕೂರು ಸಣ್ಣ ಮಟ್ಟದ
ಅಪರಾಧವಾದರೂ ಪರವಾಗಿಲ್ಲ
ಜುಮುಕಿ ಹೊತ್ತ ಕಿವಿಗಳನ್ನೇ ದಿಟ್ಟಿಸಿ ನೋಡುತ್ತೇನೆ
ಅವೆಷ್ಟು ಲೀಲಾಜಾಲವಾಗಿ
ನಿನ್ನಲ್ಲೇ ಲೀನವಾಗಿದೆ
ನೀ ತಿರುಗುವ ದಿಕ್ಕಿಗಲ್ಲ ದಿಕ್ಕೂಚಿಯಂತೆ ತಿರುಗುತ್ತದೆ
ತೋರು ಬೆರಳಿನಿಂದ ಒಮ್ಮೆ
ಮುಟ್ಟಿ ನಿನಾದ ಹೊರಡಿಸುತ್ತೇನೆ
ಮೌನ ಹೊತ್ತ ತುಟಿಗಳನೊಮ್ಮೆ ಬಿಡಿಸಿ ಮಾತಿನ ಮೆಹಂದಿ ಹಚ್ಚುತ್ತೇನೆ
ಲೇ ಇವಳೇ,
ನನ್ನವಳೆಂಬ ಕಿರು ಪರಿಚಯ ಮಾತಿಗೂ ಮಾಡಿಕೊಡು
ಆದದ್ದಾಗಲಿ ಜರುಗುವ ಅಪವಾದವೆಲ್ಲಕ್ಕೂ ನನ್ನ ಹೆಸರ
ಅಚ್ಚೊತ್ತುತ್ತೇನೆ
ನಿನ್ನತನದ ಪರಿಧಿಯೊಳಗೆ ನಾನೊಬ್ಬ ಖಾಸಾ ಆಗಿರುವಂತೆ
ತಿಳಿದಿದ್ದೇನೆ ಯಾಕೋ ಕಾಣೆ,
ನಿನ್ನ ಮುನಿಸುಗಳನ್ನೇ ಈವರೆಗೂ ಉಸಿರಿಸಿದ್ದೇನೆ ಹುಡುಗೀ
ಮೊದಲಬಾರಿಗೆ ಬಿಗಿದಪ್ಪಿ ತೋಳಿಗೆ ಒರಗಿ ಕೂರು
ಸಣ್ಣ ಮಟ್ಟದ ಅಪರಾಧವಾದರೂ ಪರವಾಗಿಲ್ಲ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments