
ನನ್ನ ಸಾವಿಗೆ
ನನ್ನ ಸಾವಿಗೆ
ನಾ ಮಾದಕತೆ ತುಂಬಿಟ್ಟಿದ್ದೇನೆ
ಬಹುವಾಗಿ
ಚೆಲುವನ ಕಾಯುವ
ಕನ್ಯೆಯ ಕತ್ತಲ ದೂಡುವ
ಕ್ಷಣಗಳಂತದ್ದು
ಮೊದಲ ಬಾರಿ ಪ್ರೇಮಿಸಲಾಗಿ
ದೂರಾಗಿ ಇರುವ ವಿರಹಿ
ಹುಡುಗನ ಕನವರಿಕೆಯಂತದ್ದು
ಬಗೆ ಬಗೆಯ ಚೆಲುವ
ಅಚ್ಚಾಗಿಸಿದ್ದೇನೆ
ನನ್ನ ಸಾವಿನ
ದಿನಮಾನ ನನ್ನ ದೂರದೃಷ್ಟಿಯಲ್ಲಿ
ಊರಿಡೀ ಯುವತಿಯರ
ಮನಗದ್ದು ಬೀಗುವ
ಹುರಿಮೀಸೆ ಕೌಮಾರನ ಗತ್ತು
ಯಾರಿಗೂ ಸಿಕ್ಕದೆ ಸಿಕ್ಕ ನಗು
ಚೆಲ್ಲಿ ನಿದ್ದೆಗೆಡಿಸುವ
ಒರಗೆಯ ಕನಸಿನ ರಾಣಿಯ
ಬೆತ್ತಲೆ ಬೆನ್ನಿನಂತದ್ದು
ನಾಜೂಕು ತೊಟ್ಟು
ಉರಿದುರಿದು ನಗುವ
ಕಂದೀಲ ಕಣ್ಣ ಸೂಕ್ಷ್ಮತೆ
ನೆಲವ ತೋಯ್ದು ಹರಿದು
ಯಾವ ದಂಡೆಗೂ ದಕ್ಕದೆ
ಬಿಸುಟಿಕೊಂಡು ಹೋಗುವ
ನದಿಯ ಪಾದರಸ ನಡಿಗೆ
ನನ್ನ ಸಾವಿಗೆಲ್ಲ ಬೆಳಕ
ನೆರಳ ಕಪ್ಪು ಕಣ್ಣೆಸಿಯಿದೆ
ಹೀಗೆಲ್ಲಾ
ಬಟಾಬಯಲ ಮುಗುಳ್ನಗು
ಪ್ರೇಮಿಸುವವನ ಕಣ್ಣು ಹೊಳಪು
ಧೈನ್ಯತೆ ತುಂಬಿಕೊಂಡ
ಬಡವನ ದೈನೇಸಿತನ
ಹೊಟ್ಟೆ ತುಂಬಿದ ಹಸಿದವನ
ನೆಮ್ಮದಿ
ಮೋಕ್ಷ ಹುಡುಕುವವನ ಕಾತರ
ನನ್ನ ಸಾವಿನ ತರಹೇವಾರಿ
ಮಗ್ಗಲುಗಳು
ಆದರೆ...
ಈ ಮನೆಯವರು
ಭಯಪಡಿಸುತ್ತಾರೆ
ಸಾವು ಭಯಾನಕವೆಂಬಂತೆ
ನಿಸ್ತೇಜವಾದ ಕಣ್ಣುಗಳು
ನೀಟಾಗಿ ಹರಡಿಕೊಂಡ ಕೈಕಾಲುಗಳು
ನನಗೆ ನೆಮ್ಮದಿಯನ್ನು
ಉಟ್ಟುಕೊಂಡ
ಬಿಳಿಬಟ್ಟೆಯಷ್ಟೇ ಕಾಣುತ್ತದೆ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments