
ನನ್ನ ಉಸಿರೂ ನಿಲ್ಲಲಿದೆ
ನನ್ನ ಉಸಿರೂ ನಿಲ್ಲಲಿದೆ
ಯಾವ ಆಸ್ಫೋಟನೆಯ
ಭೀಕರತೆಯಲ್ಲ ಅದು
ತಿಳಿದಿದ್ದೇನೆ
ತೊಟ್ಟು ಕಳಚುವ ಎಲೆಯ
ನೋವಿನಿತಾದರೂ
ದಕ್ಕಿಸಿಕೊಳ್ಳುವ
ವಿಶಾಲತೆ ನಿನ್ನಲ್ಲಿದ್ದರೆ
ಗ್ರಹಿಸಬಹುದು
ಅದೆಷ್ಟು ನಾಜೂಕಾಗಿರಬಹುದು
ಉಸಿರು ನಿಲ್ಲುವ ಕ್ರಿಯೆ
ಗಲಿಬಿಲಿಗೊಳ್ಳದೇ
ತದೇಕದಿಂದ ಗಮನಿಸು
ಮಳೆ ಇಳಿಯುವ ಮತ್ತು
ಮಣ್ಣು ನಗುವ ಸಮಯವನ್ನು
ಅಷ್ಟು ಕರಾರುವಕ್ಕಾಗಿ
ಉಸಿರು ನಿಲ್ಲಬಹುದೆಂದು
ಊಹಿಸಿಕೊಳ್ಳುತ್ತೇನೆ ಈಗ
ಬೆಳಕ ಪಾದ ಬಿರಿದ
ದಾರಿಯಲ್ಲಿ ಕತ್ತಲ
ಸಿಪ್ಪೆಯ ಹುಡುಕು
ಕಾಣಬಹುದು ಬಡಿತದ
ಸದ್ದು ಅದೇ ಮೈಲಿಗಲ್ಲಿನಾಚೆ
ಅಥವಾ ನೀ ಗಳಿಸಬೇಕೆನ್ನುವ
ಏಕಾಂತ
ಹಾಗೂ
ಯಾವ ಆಸ್ಫೋಟನೆಯ
ಭೀಕರತೆಯಲ್ಲ
ಉಸಿರು ನಿಲ್ಲುವಿಕೆ
ನಗುವ
ತೊಟ್ಟಿಲ ಕಕ್ಕುಲಾತಿ
ಅಥವಾ
ದಿಗಂತಕ್ಕಿಟ್ಟ ಶೂನ್ಯ ನೋಟ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments