
ಇಲ್ಲಿ ನೋವಿದೆ ಸಾವಿದೆ
ಇಲ್ಲಿ ನೋವಿದೆ ಸಾವಿದೆ
ಅದೇ ಸೂತಕದ ಸಂತೆ
ಕಡ್ಡೆ ಮಾರಿ
ಸಂಜೆಯಾದರೆ
ತನ್ನ ಪ್ಲಾಸ್ಟಿಕ್ ಚೀಲವನ್ನೇ
ದಿಂಬಾಗಿಸಿ ನಿದ್ದೆ
ಹೋಗುವ ಅಜ್ಜಿ
ನನ್ನ ಕುತೂಹಲ
ಫ್ಯಾನ್ ಐಸಿ
ಮೆತ್ತನೆ ಪಿಲ್ಲೋ
ಮುಖ್ಯವಾಗಿ
ಕೈಯಗಲ ಕಾಲಗಲ
ಬಿರಿಸಿದಷ್ಟು ತನ್ನದೇ
ಅನ್ನುವ ಸರ್ವ
ಸ್ವತಂತ್ರನೊಬ್ಬ
ನಿದ್ದೆಗಾಗಿ ಪೇಚಾಡುತ್ತಾನೆ
ಒಂದಾ ನೀವು
ಸುಖವನ್ನು ಹುಡುಕುವುದರಲ್ಲಿ
ಎಡವಿದ್ದೀರಿ
ಅಥವಾ
ಸುಖವನ್ನು ತಪ್ಪಾಗಿ
ಅರ್ಥೈಸಿದ್ದೀರಿ
ಮೂಳೆ ಮುರಿವ
ಸದ್ದನ್ನು ಸಂಗೀತದಂತೆ
ಮುಮ್ಮುಳಿಸುವ
ಆ ಕಲ್ಲು ಹೊರುವ
ಮಧ್ಯವಯಸ್ಕನನ್ನು
ನೀವು ಹೈಟೆಕ್
ಸ್ಪಾ ದಲ್ಲಿ ನೋಡಿರಲಿಕ್ಕಿಲ್ಲ
ಬೆನ್ನು ಹುರಿ ಮಣಿಗಂಟಿನ
ನೋವು ಆತನಿಗೆ
ಮಸಾಜ್ ಮಾಡಿಸಿಕೊಳ್ಳುವಂತದ್ದೂ
ಅಲ್ಲ
ಭಯಂಕರ
ಜೀವನೋತ್ಸಾಹಕ್ಕಾಗಿ
ಸಾವಿರ ಪುಟದ ಪುಸ್ತಕ,
ಆಶ್ರಮ,ಮೆಡಿಟೇಶನ್ನೂ
ತದ್ವಿರುದ್ಧವಾಗಿ
ಒಂದು ದೃಶ್ಯ ಕಂಡೆ
ಎರಡೂ ಕೈ ಕಾಲು
ಇಲ್ಲದ ಮನುಷ್ಯ
ದೇಹವನ್ನೇ
ಚಕ್ರಗಳಾಗಿಸಿ
ಬೇಡುತ್ತಿದ್ದ ಉರೂಸಿನಲ್ಲಿ
ಇಲ್ಲಿ ಸಾವಿದೆ ನೋವಿದೆ
ಅದೇ ಸೂತಕದ ಸಂತೆ
ಇದ್ದವನಲ್ಲಿ ಇದ್ದುದ್ದಕ್ಕೆ
ಇಲ್ಲದವನಲ್ಲಿ ಇರದಿದ್ದುದ್ದಕ್ಕೆ
ಬದುಕಿನ ಪರ
ವಕಾಲತ್ತು ವಹಿಸುವ
ಮಹಾಜನಗಳೇ
ನೀವು ಬದುಕನ್ನು ಕಂಡಿದ್ದಿಲ್ಲ
ಅಥವಾ
ನೀವು ನೋಡುವ
ಬದುಕು ನನಗೆ ಒಗ್ಗುವುದಿಲ್ಲ
ಅರ್ಥೈಸಲಾಗದ
ಜಗತ್ತನ್ನು ಅರಿಯಬೇಕೆಂಬ
ನಿಮ್ಮ ಮನುಷ್ಯ ಬುದ್ಧಿಗೆ
ನಮಸ್ಕಾರಗಳು..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments