
ನೀನು ಸಾವಧಾನಿಸು
ನೀನು ಸಾವಧಾನಿಸು
ಈ ಉರಿಯ ಉಜ್ಜಿಕೊಂಡ
ರಾತ್ರಿಯಲ್ಲಿ ನನ್ನದೆಯ
ನಂಜನ್ನು ಕೇಳುವ ನಿನ್ನ
ತಾಳ್ಮೆಗೆ ಆಯಸ್ಸಿರಲಿ ನೂರು
ನನ್ನ ಬದುಕ ಚಿತ್ರಗಳು
ನಿನ್ನ ಕಣ್ಣಲ್ಲಿ ಪಳಗಿಕೊಳ್ಳಲಿ
ಆಶಿಸುತ್ತೇನೆ ಹಾಗೆನೇ
ಜೀರ್ಣವಾಗಲಿ ಈ ನೋವಿನ
ಪುಟಗಳೆಲ್ಲ ನಿನ್ನ ಕಣ್ಣ
ಕಡಲಿನಲ್ಲಿ ಈಜಾಡಿ
ಕೇಳಿಸಿ ಕೋ
ಕಿವಿಗಳಿಗೆ ಸಾಂತ್ವಾನದ
ಮುತ್ತನಿಡುತ್ತಾ...
ನನ್ನ ಬದುಕು
ಸೋಲಿನ ತಕ್ಕಡಿ
ಕತ್ತಲ ತುಟಿಯ ಚೀರಾಟ
ಹೆಣದ ಬಾಯಾರಿಕೆ
ಉರಿದ ತೊಗಲ ಘಮ
ಕರಿದ ಪುಣ್ಣ ಬಣ್ಣ
ಒಡೆದ ಪಾದದ ಗುರುತು
ಸವೆದ ಚಪ್ಪಲಿಯ ದೇಹ
ಸುಲಿದ ಚಮಡ
ತಿಪ್ಪೆಯ ಮೋರೆ
ಗೂನು ಬೆನ್ನ ಹೊರೆ
ಒಂಟಿ ಪಾದದ ನಡಿಗೆ
ನೊಗ ಕಳಚಿದ ತೇರು
ಸೋತ ಕೈಯ ಹತಾಶೆ
ಸುಟ್ಟ ಮೊಗದ ಕೂಗು
ಬೆಂದ ಬೆವರಿನ ಗಾಯ
ತುಂಬದ ಕೊಡದ ಅಲುಗಾಟ
ಗೋರಿಯ ಕೂಗು
ಅಲೆತುಪ್ಪಿದ ಹನಿ
ಕನಸ ಕೊಂದ ಬೆರಳು
ಕಾಂತಿಕೆಟ್ಟ ಹೂವು
ಕದಡಿದ ನೀರ ಬಿಂಬ
ಮತ್ತೂ...
ನನ್ನ ಬದುಕು
ಬರಿಗಾಲ ಹೆಜ್ಜೆಗಂಟಿದ
ತಂತಿಬೇಲಿ ಮುಳ್ಳು
ನೋವ ಸಪ್ಪಳದ ಕಿವಿ
ರಾತ್ರಿ ನೀರವತೆಯ ಭಯ
ಸಣಕಲು ದೇಹದ ಆಯಾಸ
ಕೊಳ್ಳಿತುದಿಯ ಬಿಸಿ
ಸೂರ್ಯನದೆಯ ಧಗೆ
ಸುನಾಮಿ ದಿನದ ಛಾಯೆ
ರಣಬಿಸಿಲಿನ ನಗೆ
ಮರುಭೂಮಿಯ ದಾಹ
ಜೋಪಡಿಯ ಹಸಿವು
ಸಾವಿನ ಮನೆಯ ಸೂತಕ
ಕುರುಡನ ಆಕಾಂಕ್ಷೆ
ಸ್ಮಶಾನದ ಮೌನ
ಸುಳ್ಳಿನ ಮುಗುಳ್ನಗೆ
ಭ್ರಮೆಯ ಉಡಾವು
ಬರಿಯ ಕವಿಯ
ಕಲ್ಪನೆ....!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments