
ನನ್ನ ನೋವು ನನ್ನದಲ್ಲ
ನನ್ನ ನೋವು ನನ್ನದಲ್ಲ
ಎಂದು ಕೊಂಡಾಕ್ಷಣ
ಬೊಗಸೆ ಕೈಯಾಗಿಸಿಬೇಡುವ
ಹರಿದ ಧಾವಣಿ ಟ್ರಾಫಿಕ್
ಹುಡುಗೀ
ಬದುಕೇ ದುರಂತವೆನಿಸುವ
ಕೈಗಳೆರಡೂ ಕಾಣೆಯಾದ
ಊರೂಸಿನ ಭಿಕ್ಷುಕ
ಶೂ ಪಾಲಿಷ್ ಹಾಕುವ
ಶಾಲೆ ವಯಸ್ಸಿನ ಹುಡುಗ
ಹೀಗೆಯೇ ಕಥೆಗಳು
ಕಾಣ ಸಿಗುತ್ತದೆ
ಎಲ್ಲಾ ಕಳಚಿ
ದಿಗಂಬರನಾಗಬೇಕು
ಒಂದು ಸೊಟ್ಟ ಗಾಯ
ಎದೆಯಲ್ಲಿ ಉಳಿಯದಂತೆ
ನೀರಿಗೆ ಪರದಾಡುವ
ಐದು ಮಕ್ಕಳ ತಾಯಿ
ಬೂದಿ ಹುಡುಕುವ
ಋತುಮತಿಯಾದ ಕನ್ಯೆ
ಈ ಷಹರದ ದಾರುಣ
ವ್ಯಥೆ ಚಾಲ್ತಿಯಲ್ಲಿರುವಾಗ
ಹಸಿವ ಬೆನ್ನಿಗೆ ಕಟ್ಟಿ
ಕರಾವು ಮಾಡುವವ
ಮೂವತ್ತು ಕಳೆದ
ಹೆಣ್ಣಿರುವ ತಂದೆ
ಯಾವ ವರಮಾನವಿಲ್ಲದೆಯೂ
ಸಂಸಾರ ಹೊರುವ
ಮನೆಯಜಮಾನ
ಜಗತ್ತೇ ಕಥೆಗಳ ಬುತ್ತಿ
ಇಷ್ಟೇ ಸಿಹಿ ಹೆಚ್ಚು ಕಹಿ
ಇನ್ನೊಂದಿಷ್ಟು ನೋವಿದೆ..
ಉಡದ ಬಟ್ಟೆಯ
ಕನಸುವ ಹುಡುಗೀ
ಷೋರೂಮಿನ
ಬೈಕ್ ಮೇಲೆ
ಆಸೆಗಣ್ಣು ನೆಟ್ಟುಬಿಡುವ
ಮಧ್ಯಮ ಯುವಕ
ಇನ್ನು ಹತ್ತು ಹಲವು
ಆದ್ದರಿಂದ...
ನನ್ನ ನೋವು ನನ್ನದಲ್ಲ
ಮುಗಿಯದ ಕಥೆಯ
ತುಣುಕೊಂಡಷ್ಟೇ..!
-ಅವಿಜ್ಞಾನಿ
ಹಂಚಿಕೊಳ್ಳಿ
ಹಿಂಬಾಲಿಸಿ

ಪ್ರತಿಕ್ರಿಯೆಗಳು · Comments